ನಮ್ಮ ಶಾಲೆಯ ಇತಿಹಾಸ


ಮಕ್ಕಳ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ರೂಪಿಸುವಲ್ಲಿ ಮಾತೃಭಾಷೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಜೀವನದ ಆರಂಭದಿಂದಲೂ ಮಾತೃಭಾಷೆಯನ್ನು ಕಲಿಯುವ ಮಗು, ವ್ಯಾಪಕವಾದ ಭಾಷಾ ಕೌಶಲ್ಯಗಳನ್ನು ಹೊಂದಿ, ಅದ್ಭುತವಾದ ಆಲೋಚನಾ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಶುರುವಾದ ಕಾರ್ಯಕ್ರಮವೇ , "ಬೃಂದಾವನ ಕನ್ನಡ ಕಲಿಸೋಣ". 

ಬೃಂದಾವನದ ಐದನೇ ಶಾಲೆಯ ಉದ್ಘಾಟನೆ ಜನವರಿ 2020ರಲ್ಲಿ ನ್ಯೂ ಜೆರ್ಸಿಯ  ಮಾರ್ಲ್ಬರೋ ನಗರದಲ್ಲಿ ನಡೆಯಿತು. ಶಾಲೆಯ ಉದ್ಘಾಟನೆಗೆ 

ಶ್ರೀ ಸರ್ ಎಮ್  ವಿಶ್ವೇಶ್ವರಯ್ಯನವರ ಮರಿ ಮೊಮ್ಮಗರಾದ  ಶ್ರೀ ಮೋಕ್ಷಗುಂಡಂ ಶೇಷಾದ್ರಿಯವರು ಮತ್ತು ಶ್ರೀ ಗೌತಮ್ ಜೋಯಿಸ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗೌತಮ್ ಜೋಯಿಸ್ರವರು  ಹಾರ್ವರ್ಡ್ ನಿಂದ ಕಾನೂನು ಪದವಿ ಪಡೆದು ಅಮೇರಿಕ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.  ಅವರು, ಭಾರತೀಯ ಮೂಲದ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಕೊಡುಗೆಯನ್ನು ನೀಡುತ್ತಿದ್ದಾರೆ, ರಾಜಕೀಯದಲ್ಲೂ ಇನ್ನಷ್ಟು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಉತ್ತೇಜಿಸಿದರು. ಮಾತೃ ಭಾಷೆಯ ಅರಿವು ಇನ್ನಷ್ಟು ಆತ್ಮ ವಿಶ್ವಾಸ ಹೆಚ್ಚಿಸುತ್ತದೆ ಎಂದರು.


ಸ್ವಯಂಸೇವಕ ಶಿಕ್ಷಕರು ಮತ್ತು ಸಮುದಾಯದ ಸದಸ್ಯರ ಉತ್ಸಾಹಭರಿತ ಬೆಂಬಲದಿಂದಾಗಿ ಶಾಲೆ ಸಫಲತೆಯಿಂದ ಮುನ್ನಡೆಯುತ್ತಿದೆ. ಇತ್ತೀಚಿಗೆ ಸೇರ್ಪಡೆಯಾದ ಕನ್ನಡ ಅಕಾಡೆಮಿಯ, ಕನ್ನಡ ಕಲಿ ಪಠ್ಯಕ್ರಮ ಮತ್ತು ಆನ್ಲೈನ್ ಪ್ರಕ್ರಿಯೆಯು, ವಿಷಯ ವಿತರಣೆಯನ್ನು ಸುಗಮಗೊಳಿಸಲು ಸಹಾಯ ಮಾಡಿ, ಕನ್ನಡ ಕಲಿಕೆಯ ಅನುಭವವನ್ನು ಸುಮಧುರಗೊಳಿಸಿದೆ.


ಬೃಂದಾವನ ಕನ್ನಡ ಕೂಟದ ನೇತೃತ್ವದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಲು ಮಕ್ಕಳಿಗೆ ಅವಕಾಶ ದೊರೆಯುವುದರಿಂದ, ಅವರು ನಾಟಕ, ನೃತ್ಯ, ಗಾಯನಗಳಲ್ಲೂ ತರಬೇತಿ ಪಡೆಯುತ್ತಿದ್ದಾರೆ. ಕರ್ನಾಟಕದ ಸಂಸ್ಕೃತಿ, ಇತಿಹಾಸ, ಕಲೆಗಳ ಪರಿಚಯವೂ ಮಕ್ಕಳಿಗೆ ದೊರೆಯುತ್ತಿದೆ. ಪರದೇಶದಲ್ಲಿದ್ದು ಕೊಂಡೂ ನಮ್ಮ ಮಕ್ಕಳು ಭಾರತೀಯ ಮೌಲ್ಯಗಳನ್ನು ಉಳಿಸಿ, ಬೆಳಿಸಿಕೊಳ್ಳುತ್ತಿದ್ದಾರೆ.


ಬೃಂದಾವನಕ್ಕೆ ಸೇರುವ ಮುನ್ನ ಮಾರ್ಲ್ಬರೋ ನಗರದಲ್ಲಿ 1998ರಿಂದ ಶ್ರೀ ಸೋಮ ಮೂರ್ತಿ ಯವರು ಕನ್ನಡ ಶಾಲೆಯನ್ನು ಆರಂಭಿಸಿದರು. 1999ರ ನಂತರ ಶ್ರೀ ಬಾಲ ಎಸ್  ಪ್ರಸನ್ನ, ಶ್ರೀಮತಿ ಲತಾ ಸ್ವಾಮಿನಾಥನ್ ಹಾಗೂ ಶ್ರೀ ರಾಯ ಹಳೆಮನೆಯವರ ಉಪಸ್ಥಿತಿಯಲ್ಲಿ ನಡೆಯುತ್ತಿದ್ದು, 2004ರಿಂದ ನಮ್ಮ ಶಾಲೆಯ ಹಿರಿಯ ಶಿಕ್ಷಕಿಯಾದ ಶ್ರೀಮತಿ ರಾಧಾ ದಯಾನಿಧಿಯವರ ನೇತೃತ್ವದಲ್ಲಿ ನಡೆಯಿತು, ಕೆಲವು ಸಮಯ ಶ್ರೀಮತಿ ಶ್ರುತಿ ಕಿರಣ್ ಅವರು ರಾಧಾ ಅವರಿಗೆ ಸಹಾಯ ಮಾಡುತ್ತಿದ್ದರು.